Tuesday, November 07, 2017

’ಕೊಳಲಗಿರಿ’ಯ ಬಗ್ಗೆ ಒಂದಿಷ್ಟು'



’ಕೊಳಲಗಿರಿ’;ಉಡುಪಿ ಕಂದಾಯ ಜಿಲ್ಲೆಯ ಸದ್ಯಕ್ಕೆ ಉಡುಪಿ ತಾಲೂಕಿನ(ಮುಂದೆ ಬ್ರಹ್ಮಾವರ ತಾಲೂಕು)ಉಪ್ಪೂರು ಗ್ರಾಮದ ಒಂದು ಹಳ್ಳಿ.ಉಡುಪಿಯ ಕಲ್ಯಾನ್ಪುರ ಸುವರ್ಣ ನದಿ ಸೇತುವೆ ದಾಟಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಸಂಕೆ 66ರಲ್ಲಿ ಕೆ.ಜಿ ರೋಡ್ (ಕೊಳಲಗಿರಿ ರೋಡ್)ತಿರುವಿನ ಮುಖಾಂತರದ ರಸ್ತೆಯಲ್ಲಿ(ರಸ್ತೆಗೆ ಮಹಾತೋಭಾರ ಸಿದ್ಧಿವಿನಾಯಕನಿಗೆ ಸಮರ್ಪಿಸಿದ ಸ್ವಾಗತ ಗೋಪುರವಿದೆ) 2 ಕಿ.ಮಿನಷ್ಟು ಮುಂದಕ್ಕೆ ಸಾಗಿದಾಗ ಸೀಗುವ ಗುಡ್ಡ ಪ್ರದೇಶದ(ಗಿರಿ ಪ್ರದೇಶದ)ಊರೇ ’ಕೊಳಲಗಿರಿ’. ರಾಜಕೀಯವಾಗಿ ಹೇಳುವುದಾದರೆ ಕೊಳಲಗಿರಿ;ಉಡುಪಿ-ಚಿಕ್ಕಮಗಳೂರು ಲೋಕಸಭಾ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಊರು.


ಗಿರಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಬಯಲು ಗದ್ದೆಗಳು ಇಲ್ಲದಿದ್ದರೂ ಒಂದು ಕಾಲದಲ್ಲಿ ಸುತ್ತಮುತ್ತಲಿನ ಪ್ರದೇಶದ(ಊರಿನ) ಜನರ ಮೂಲ ವೃತ್ತಿ ಕೃಷಿ ಹಾಗೂ ಹೈನುಗಾರಿಕೆ.ಶಿಕ್ಷಣ,ವಿದ್ಯಾರ್ಹತೆಗೆ ತಕ್ಕ ಉದ್ಯೋಗ.ಉದ್ಯೋಗಕ್ಕೆ ಬೇಕಾಗಿ ವಲಸೆ,ವ್ಯವಸಾಯದಲ್ಲಿ ಕಠೀಣತೆ ಎಂಬ ಭಾವನೆ ಹಾಗೂ ನಿರಾಸಕ್ತಿ ಈ ಎಲ್ಲಾ ಕಾರಣಗಳಿಂದ ಇಂದು ಮೂಲ ಕಸುಬು ವ್ಯವಸಾಯದಿಂದ ಕಾಲಕ್ಕೆ ಆಗತ್ಯವಿರುವ ಉದ್ಯೋಗ ಹಾಗೂ ವ್ಯಾಪಾರಗಳಿಗೆ ವರ್ಗಾವಣೆ ಹೊಂದಿದೆ.ಕೊಳಲಗಿರಿಯ ಸುತ್ತಮುತ್ತಲಿನ ಪ್ರದೇಶದಿಂದ ಎರಡು ನದಿಗಳು ಹರಿದು ಆರಬ್ಬಿ ಸಮುದ್ರವನ್ನು ಸೇರುತ್ತವೆ.ಒಂದು ಸುವರ್ಣ ನದಿ.ಇನ್ನೊಂದು ಸೀತಾ ನದಿ.ಸುವರ್ಣ ನದಿಯು ಪಶ್ಚಿಮ ಘಟ್ಟದಿಂದ ಉಗಮವಾಗಿ ಪಶ್ವಿಮಾಭಿಮುಖವಾಗಿ ಹರಿದು ಉಡುಪಿ ತಾಲೂಕಿನ ಕಾಮೇಶ್ವರ ಎಂಬ ಹಳ್ಳಿಯಲ್ಲಿ ಆರಬ್ಬಿ ಸಮುದ್ರವನ್ನು ಸೇರುತ್ತದೆ.ಈ ನದಿಯನ್ನು ಪ್ರಾರಂಭಿಕ ಹಂತದಲ್ಲಿ ’ಎಣ್ಣೆಹೋಳೆ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ.ಮಳೆಗಾಲ ಬಿಟ್ಟು ಇತರ ವೇಳೆಯಲ್ಲಿ ಈ ನದಿಯಲ್ಲಿ ಹರಿಯುವ ನೀರು ಉಪ್ಪು ನೀರಾಗಿದ್ದು,ಇದು ಆರಬ್ಬಿ ಸಮುದ್ರ ಸೇರುವ ಮೊದಲು 62 ಕಿ.ಮಿ ನಷ್ಟು ದೂರ ಹರಿಯುತ್ತದೆ.ಸೀತಾ ನದಿಯ ಉಗಮ ಸ್ಥಳ ನರಸಿಂಹ ಪರ್ವತವಾಗಿದ್ದು ಕ್ರಮೇಣ ಆಗುಂಬೆ ಕಾಡ ಶ್ರೇಣಿಗಳ ಮೂಲಕ ಹೆಬ್ರಿ,ಬಾರ್ಕೂರಲ್ಲಿ ಹರಿದು ಸುವರ್ಣ ನದಿಯೊಂದಿಗೆ ಆರಬ್ಬಿ ಸಮುದ್ರವನ್ನು ಸೇರುವ ಮೊದಲು ಕೂಡ್ಲು ಪಾಲ್ಸ್,ಬರ್ಕಾನಾ ಫಾಲ್ಸ್ ಹಾಗೂ ಜೊಮ್ಲು ಫಾಲ್ಸ್ ಎಂಬ ಆಕರ್ಷಣೀಯ ಪಕೃತಿ ಮನೋಹರಕ ಸಣ್ಣ-ಸಣ್ಣ ಜಲಪಾತಗಳನ್ನು ಉಂಟುಮಾಡಿ ಪ್ರವಾಸಿಗರನ್ನು ಅಕರ್ಷಿಸುತ್ತದೆ.

ಇತಿಹಾಸದಲ್ಲಿರುವ’ ’ಕೊಳಲಗಿರಿ’

ಇತಿಹಾಸದಲ್ಲಿ ’ಕೊಳಲಗಿರಿ’ಯ ಉಲ್ಲೇಖವಾಗುವುದು ಉದ್ಯಾವರದ ಆಲುಪ ರಾಜವಂಶದ ರಾಜರ ಆಳ್ವಿಕೆಯ ಕಾಲದಲ್ಲಿ. ಕ್ರಿ.ಶ 7ನೇಯ ಶತಮಾನದಿಂದ ಕ್ರಿ.ಶ 14 ನೇಯ ಶತಮಾನದವರೆಗೆ ನಮ್ಮ ತುಳುನಾಡನ್ನು ಆಲುಪ ರಾಜವಂಶದ ರಾಜರು ಆಳಿದ್ದರು.ಅಂದು ಈ ರಾಜವಂಶದ ರಾಜಧಾನಿಯು ಆರಂಭದಲ್ಲಿ ಉದಯಪುರ(ಉದಯವಾರ) ಅಂದರೆ ಇಂದಿನ ಉಡುಪಿ ತಾಲೂಕಿನ ಉದ್ಯಾವರ ಆಗಿತ್ತು.ನಂತರ ಕ್ರಮೇಣ ಇವರು ತಮ್ಮ ರಾಜಧಾನಿಯನ್ನು ಮಂಗಳೂರು(ಆಗಿನ ಮಂಗಳಪುರ) ಹಾಗೂ ಬಾರ್ಕೂರಿಗೆ(ಆಗಿನ ಬಾರಕೂರಿಗೆ) ಬದಲಾಯಿಸಿದ್ದರು.ಇತಿಹಾಸದ ಪುಸ್ತಕ ತೆರೆಯುವಾಗ ಆಲುಪ ರಾಜವಂಶದ ರಾಜರ ಆಳ್ವಿಕೆಯ ಕಾಲ ಘಟ್ಟದ ಎಲ್ಲಾ ರಾಜರ ಆಳ್ವಿಕೆಯ ಇತಿಹಾಸದಲ್ಲಿ ’ಕೊಳಲಗಿರಿ’ಯ ಹೆಸರು ಉಲ್ಲೇಖವಾಗದಿದ್ದರೂ,ಉದ್ಯಾವರದಲ್ಲಿ ಪತ್ತೆಯಾದ ಸಾಂಬುಕಲ್ಲು ಶಾಸನದಲ್ಲಿ,ಕ್ರಿ.ಶ 750 ರಿಂದ 770ರವರೆಗೆ ಅಂದರೆ ಏಳನೇಯ ಶತಮಾನದ ಮಧ್ಯದಲ್ಲಿ ಉದಯಪುರ(ಉದ್ಯಾವರ)ವನ್ನು ಆಳಿದ ಅಲುಪ ರಾಜ ’ಮಾರಮ್ಮ ಅಲುವರಸ’ನ ಆಳ್ವಿಕೆಯಲ್ಲಿ ಇದ್ದ ಎರಡು ನಗರ ಆಡಳಿತ ಕೇಂದ್ರಗಳ ಉಲ್ಲೇಖವಿದೆ.ಅದರಲ್ಲಿ ಒಂದು ನಗರ ಆವರ ರಾಜಧಾನಿ ಉದಯಪುರ(ಉದ್ಯಾವರ)ವಾಗಿದ್ದು.ಇನ್ನೊಂದು ನಗರ ಉದಯಪುರದಿಂದ ಉತ್ತರ ದಿಕ್ಕಿನ 6ಕಿ.ಮಿ ದೂರದಲ್ಲಿ ಸುವರ್ಣ ನದಿ ದಡದಲ್ಲಿ ಇರುವ ’ಕೊಳಲ-ನಕರ’ ಎಂದು ಉಲೇಖಿಸಿದೆ (’ನಕರ’ಅಂದರೆ ’ನಗರ’). ಈ ”ಕೊಳಲ-ನಕರ’ವೇ ಇಂದಿನ ಉಪ್ಪೂರು ಗ್ರಾಮದ ”ಕೊಳಲಗಿರಿ’ ಎಂದು ಇತಿಹಾಸ ಪಂಡಿತರು 20ನೇಯ ಶತಮಾನದ ಆದಿಯಲ್ಲೇ ಧೃಡಪಡಿಸಿದ್ದಾರೆ.

ಆಲುಪ ರಾಜರು ತಮ್ಮ ಆಡಳಿತವನ್ನು ಸರಳಗೊಳಿಸಲು ಮತ್ತು  ಸ್ಥಳೀಯ ಆಡಳಿತವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆಡಳಿತ ಪ್ರದೇಶವನ್ನು ನಾಡು,ಹಳ್ಳಿ ಹಾಗೂ ನಕರ ಪ್ರದೇಶವೆಂದು ವಿಭಾಗಿಸಿದ್ದರು.ನಾಡು ಎಂದರೆ ಹಲವು ಹಳ್ಳಿಗಳ ಸಮೂಹ.ಸಾಮಾನ್ಯವಾಗಿ ಎರಡರಿಂದ ಮೂವತ್ತೇರಡು ಹಳ್ಳಿಗಳು ಒಂದು ನಾಡಿನಲ್ಲಿ ಇರುತ್ತಿದ್ದವು.’ನಕರ’ಅಂದರೆ ’ನಗರ’ ಪ್ರದೇಶವಾಗಿದ್ದು.ಈ ನಗರಗಳಿಗೆ ಒಬ್ಬ ಆಡಳಿತ ಮುಖ್ಯಸ್ಥನನ್ನು ರಾಜರು ನೇಮಿಸುತ್ತಿದ್ದರು.ಆ ಆಡಳಿತ ಮುಖ್ಯಸ್ಥನಿಗೆ ’ನಾಯ್ಗಾ’ ಅಂದರೆ ’ನಾಯಕ’ಎಂಬ ಹೆಸರಿತ್ತು.ಅಂತೆಯೇ ಮಾರಮ್ಮ ಅಲುವರಸನ ಕಾಲದಲ್ಲಿ ಕೊಳಲ-ನಕರಕ್ಕೆ(ಕೊಳಲಗಿರಿಗೆ) ಕರಸಿ ನಾಯ್ಗಾ(ಕೊಳಲ-ನಕರಕ್ಕೆ ಕರಸಿ ನಾಯ್ಗಾ)ನೆಂಬ ಮುಖ್ಯಸ್ಥನಿದ್ದನು.ಈ ನಾಯ್ಗಾನು ರಾಜನಿಗೆ ಎಲ್ಲಾ ರೀತಿಯ ಆಡಳಿದಲ್ಲಿ ಸಹಕಾರವನ್ನು ನೀಡುತ್ತಿದ್ದನು.ಆ ಕಾಲದಲ್ಲಿ ನಗರದಲ್ಲಿ ವಾಸಿಸುವ ನಾಗರೀಕರನ್ನು ’ಒಕ್ಕಲು’ ಎಂದೂ,ಹಲವು ಒಕ್ಕಲುಗಳ ಸಮೂಹವನ್ನು ’ನಗರ ಸಮೂಹ’ಎಂದು ಕರೆಯುತ್ತಿದ್ದರು.

ವಿಚಿತ್ರವೆಂದರೆ ಕ್ರಿ.ಶ ಏಳನೇಯ ಶತಮಾನದಲ್ಲಿ ನಗರ ಕೇಂದ್ರಿತ ಪ್ರದೇಶವಾಗಿದ್ದ ’ಕೊಳಲಗಿರಿ’ಇಂದು ಕೇವಲ ಗುಡ್ಡ ಪ್ರದೇಶದ ಸಣ್ಣ ಊರು ಮಾತ್ರ.

ನಮ್ಮ ಕೊಳಲಗಿರಿಯ ಬಗ್ಗೆ ಇನ್ನೊಂದು ಇತಿಹಾಸ ನನಗೆ ಓದಲು ಸಿಕ್ಕಿದ್ದು ಖ್ಯಾತ ಇತಿಹಾಸ ತಜ್ಞ ದಿ.ಡಾ.ಪಿ.ಗುರುರಾಜ್ ಭಟ್’ರವರ Antiquities of South Canara’ ಎಂಬ ಪುಸ್ತಕದಲ್ಲಿ.ಈ ಪುಸ್ತಕದಲ್ಲಿ ಪಿ.ಗುರುರಾಜ್ ಭಟ್ಟರು ಹೀಗೆ ಉಲ್ಲೇಕಿಸಿದ್ದಾರೆ;’ಕೊಳಲಗಿರಿಯ ಗುಡ್ಡದಲ್ಲಿ ಕೊಳಲು ಕೃಷ್ಣನ ದೇವಾಲಯವಿದ್ದ ಕಾರಣ ಕೊಳಲಗಿರಿ’ಎಂಬ ಹೆಸರು ಬಂದಿರಬಹುದು ಎಂದು.ಈ ಮಾಹಿತಿಗೆ ಪೂರಕ ಎಂಬಂತೆ ನನ್ನ ದೊಡ್ಡಪ್ಪನವರು 50-60 ವರ್ಷಗಳ ಹಿಂದೆ ಪ್ರಸ್ತುತ ಇರುವ ಕೊಳಲಗಿರಿ ಇಗರ್ಜಿ ಶಾಲೆಗೆ ಹೋಗುವಾಗ ಕೊಳಲು ಕೃಷ್ಣನ ದೇವಾಲಯವಿರುವ ಬಗ್ಗೆ ಕುರುಹು ಒಂದನ್ನು ನೋಡಿದ್ದಾರಂತೆ.ಅಷ್ಟಲ್ಲದೇ ಕ್ರಿ.ಶ ಏಳನೇಯ ಶತಮಾನದ ಅಲುಪ ರಾಜರ ಕಾಲದಲ್ಲಿಯೇ ’ಕೊಳಲಗಿರಿ’ಗೆ ’ಕೊಳಲ-ನಕರ’ಎಂಬ ಹೆಸರಿದ್ದ ಕಾರಣ ಕೊಳಲಗಿರಿಯಲ್ಲಿ ಕೊಳಲು ಕೃಷ್ಣನ ದೇವಾಲಯವಿದ್ದಿದ್ದಾರೆ ಮತ್ತು ಅದರಿಂದಲೇ ಕೊಳಲ-ಗಿರಿ(ಕೊಳಲ-ನಕರ) ಎಂಬ ಹೆಸರು ಬಂದಿದ್ದಾರೆ ಆ ದೇವಾಲಯ ಕ್ರಿ.ಶ ಏಳನೇಯ ಶತಮಾನಕ್ಕಿಂತ ಪುರಾತನ ದೇವಾಲಯವಾಗಿರುವ ಸಾಧ್ಯತೆ ಹೆಚ್ಚು(ಊಹೆ ಮಾತ್ರ).

ಆದರೆ ಇಂದು ಕೊಳಲಗಿರಿಯಲ್ಲಿ ಕೃಷ್ಣ ದೇವಾಲಯ ಇದ್ದಿರುವ ಬಗ್ಗೆ ಯಾವುದೇ ಕುರುಹು ನನ್ನ ಗಮನಕ್ಕೆ ಬಂದಿಲ್ಲ.ಆದರೂ ದಿ.ಡಾ.ಪಿ.ಗುರುರಾಜ್ ಭಟ್ಟ್’ರವರ ಅಧ್ಯಯನ,ಸಂಶೋಧನೆಯಲ್ಲಿ ವಿಶ್ವಾಸವಿಟ್ಟ ನಾನು ಕೊಳಲಗಿರಿಯಲ್ಲಿ ಕೃಷ್ಣನ ದೇವಾಲಯವಿದ್ದು ,ಅದು ಯಾವುದಾದರೂ ಕಾಲಘಟ್ಟದಲ್ಲಿ ನಶಿಸಿ ಹೋಗಿರಬಹುದೆಂದು ಎಂದು ನಂಬಿರುತ್ತೇನೆ.

ಊಹೆ ಹಾಗೂ ಮುಂದಿರುವ ಮುಂದಿರುವ ಪ್ರಶ್ನೆಗಳು:

1.ತುಳು ಭಾಷೆಯಲ್ಲಿ ’ಕೊಳಲ’ಅಂದರೆ ’ಕಾಳಗ’(ಯುದ್ದ).ತುಳುನಾಡಿನ ಭಾಗವಾಗಿದ್ದ ’ಕೊಳಲಗಿರಿ’ ಏಳನೇಯ ಶತಮಾನಕ್ಕಿಂತ ಮೊದಲು ರಾಜರು ಯುದ್ದ ಮಾಡುವ ಸ್ಥಳವಾಗಿತ್ತೆ?
2.ಕೊಳಲಗಿರಿಯಲ್ಲಿ ಇದ್ದ ಕೃಷ್ಣ ದೇವಾಲಯ ಯಾವ ಕಾಲದಲ್ಲಿ ಸ್ಥಾಪಿತವಾಯಿತು? ಯಾವ ಕಾಲದಲ್ಲಿ ನಶಿಸಿಹೋಯಿತು? ಎಲ್ಲಿಯಾದರೂ,ಏನಾದರೂ.ಯಾರಿದಾಂದರೂ ಕುರುಹು-ಮಾಹಿತಿಗಳು ಸೀಗಬಹುದೇ?

(ಇನ್ನೂ ಹುಡುಕಾಟದಲ್ಲಿದ್ದೇನೆ...)

ಗ್ರಂಥಋಣ;
1.ಪ್ರೊ.ಬಾಸ್ಕರ ಆನಂದ್ ಸಾಲೆತ್ತೂರು, Book of ‘Ancient Karnataka Volume-1’ Tuluva History, 1936 ಪುಟ ಸಂಕೆ 79-80,175-177
2.ಡಾ.ಪಿ.ಗುರುರಾಜ್ ಭಟ್, Book of Studies of Tuluva History and Culture; Pre-Historic times up to Modern’1975 ಪುಟ ಸಂಕೆ-218
3.ಶ್ರೀ ಗಣಪತಿ ರಾವ್ ಆಯ್ಗಲ್ Book of History of South Canara’ ಪುಟ ಸಂಕೆ- 84
4. ಡಾ.ಪಿ.ಗುರುರಾಜ್ ಭಟ್, Book of ‘Antiquities of South Canara’ 1969 ಪುಟ ಸಂಕೆ 23-24
5 ಶ್ರೀ ಜೊರ್ಜ್ ಮಸ್ಕರೇನ್ಹಸ್.2000 ರಲ್ಲಿ ಕೊಳಲಗಿರಿ ಚರ್ಚ್ ಪತ್ರಿಕೆಗೆ ಬರೆದ ಲೇಖನ.


(’ಕೊಳಲಗಿರಿ’ಯ ಬಗ್ಗೆ ಇನ್ನಷ್ಟು ಮಾಹಿತಿಗಳು ಮುಂದಿನ ದಿನಗಳಲ್ಲಿ)
-ಮೆಲ್ವಿನ್ ಕೊಳಲಗಿರಿ

No comments:

Post a Comment