Monday, November 13, 2017

ಉಪ್ಪೂರು ದೀಪೋತ್ಸವ ಹಾಗೂ ಮಹಾತೋಭಾರ ಶ್ರೀ ಸಿದ್ಧಿವಿನಾಯಕ ದೇವಾಲಯ


ಕೆ.ಜಿ ರೋಡಿನಲ್ಲಿರುವ ಸ್ವಾಗತ ಗೋಪುರ
ಈ ಬುಧವಾರ(15/11/2017) ಹಾಗೂ ಗುರುವಾರ(16/11/2017)ಶ್ರೀ ಸಿದ್ಧಿವಿನಾಯಕ ದೇವಾಲಯದ ರಥೋತ್ಸವ ಹಾಗೂ ದೀಪೋತ್ಸವ.ಉತ್ಸವ ಹಾಗೂ ಚರ್ಚ್ ಸಾಂತ್‌ಮಾರಿ ಹಬ್ಬಗಳು ಬಂದಾಗ ನಮಗೆ ಹಳ್ಳಿ ನಿವಾಸಿಗಳಿಗೆ ಏನೋ ಒಂದು ರೀತಿಯ ಸಡಗರ.ಧರ್ಮ ಭೇದಭಾವಗಳನ್ನು ಮರೆತು ನಾವುಗಳು ಊರ ದೀಪೋತ್ಸವ ಅಥವಾ ಚರ್ಚ್ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸುವುತ್ತಿರುವುದು ಇಂದು-ನಿನ್ನೆಯಿಂದಲ್ಲ.ಕೆಲವು ತಲೆಮಾರುಗಳಿಂದ ನಿಲ್ಲದ ನದಿಯ ನೀರಿನಂತೆ ಸೋದರತ್ವ ಎಂಬುವುದು ನಿರಂತರವಾಗಿ ನಮ್ಮೊಳಗೆ ಹರಿದು ಬಂದ ಆಸ್ತಿ ಎಂದರೆ ತಪ್ಪಗಲಾರದು.ಮನುಷ್ಯನು ಸದಾ ಆಶಿಸುವುದು ಮನಶಾಂತಿಯನ್ನು.ಆ ಮನಶಾಂತಿಯನ್ನು ಪಡೆಯಲು ಏನಾದರೂ ಒಂದು ಪ್ರಯತ್ನ ಮಾಡುತ್ತಿರುತ್ತಾನೆ.ನಮ್ಮ ಹಳ್ಳಿ ಜನರಿಗೆ ಹೆಚ್ಚಾಗಿ ಮನಶಾಂತಿ ನೀಡುವ ಸ್ಥಳಗಳೆಂದರೆ ದೇವಾಲಯಗಳು,ಚರ್ಚ್‌ಗಳು ಹಾಗೂ ಮಸೀದಿಗಳು.ಆವರವರ ನಂಬಿಕೆಗೆ ಆನುಗುಣವಾಗಿ ಆವರವರಿಗೆ ಬೇಕಾದ ಊರ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನಶಾಂತಿಯನ್ನು ಹಾಗೂ ಸಂತೃಪ್ತಿಯನ್ನು ಪಡೆದುಕೊಳ್ಳುತ್ತಾರೆ.ಆದರೆ ನನ್ನ ವಯುಕ್ತಿಕ ಆಭಿಪ್ರಾಯದಂತೆ;ಧಾರ್ಮಿಕ ನಿರ್ಬಂಧವಿಲ್ಲದೆ ಎಲ್ಲರಿಗೂ ಉಲ್ಲಾಸವನ್ನು ನೀಡುವ ಆಚರಣೆ ಎಂದರೆ ಈ ಉತ್ಸವಗಳು.ಉತ್ಸವಗಳು ಯಾವುದೇ ಇರಲಿ,ಅದು ದೀಪೋತ್ಸವ ಆಗಿರಲಿ ಅಥವಾ ಸಾಂತ್‌ಮಾರಿ ಹಬ್ಬವಾಗಿರಲಿ ನಾವು ಹಳ್ಳಿಯ ಜನರು ಪರಸ್ಪರ ಉತ್ಸವಗಳಿಗೆ ಭೇಟಿ ನೀಡಿದಾಗ ವಿವರಿಸಲಾಗದ ವಿಶೇಷ ರೀತಿಯ ಸಂಭ್ರಮವನ್ನು ಕಂಡುಕೊಳ್ಳುತ್ತೇವೆ.ಇದನ್ನೇ ಸೋದರತ್ವ ಆನ್ನುವುದು.ಈ ಜಾತಿ-ಧರ್ಮಗಳನ್ನು ಮೀರಿದ ಸೋದರತ್ವವೇ ನನಗೆ ಇಂದು ಈ ಬರಹವನ್ನು ಬರೆಯಲು ಪ್ರೇರೆಪಿಸಿದ್ದು.

ಇರಲಿ,ಪ್ರತಿವರ್ಷವು ಉಪ್ಪೂರು ಜಾತ್ರೆ ಎಂದಾಕ್ಷಣ ನನಗೆ ನನ್ನ ಬಾಲ್ಯದ ನೆನಪುಗಳು ಮರುಕಳಿಸುತ್ತವೆ;ನನ್ನ ಪೂಜ್ಯ ತಂದೆಯವರೊಂದಿಗೆ ರಥೋತ್ಸವಕ್ಕೆ ಹೋದ ನೆನಪು,ರಾತ್ರಿ ಒಂದು-ಎರಡು ಘಂಟೆಯ ಹೊತ್ತಿನಲ್ಲಿ ನಡೆಯುವ ರಥೋತ್ಸವಕ್ಕೆ ಎರಡು-ಮೂರು ಘಂಟೆ ಮೊದಲೇ ಹೋಗಿ,ಕಾದು-ಕಾದು ಸುಸ್ತಾಗಿ ಅಲ್ಲಿಯೇ ಹೊಲದಲ್ಲಿ ಮಲಗಿದ ನೆನಪು,ನಮ್ಮ ನೆರಮನೆಯ ಚಾರ(ನಾರಾಯಣ ಎಂದು ಆವರ ಹೆಸರು-ಊರಿನಲ್ಲಿ ಚಾರ ಎಂದೇ ಪ್ರಖ್ಯಾತಿ)ಮಾರಲು ಇಟ್ಟ ತಾಳೆ ಕಣ್ಣು(ಹಣ್ಣು)ಗಳನ್ನು ತಿಂದ ನೆನಪು,ರಾತ್ರಿಯಲ್ಲಿ ವಿದ್ಯುತ್ ದ್ವೀಪದಿಂದ ಆಲಂಕೃತಗೊಂಡ ದೇವಾಲಯದ ದಿವ್ಯನೋಟ,ದ್ವೀಪದ ಬೆಳಕಿನೊಂದಿಗೆ ಸರೋರವದಲ್ಲಿ ತಿರುಗಾಡುವ ಆಲಂಕೃತ ದೋಣಿ(ತೆಪ್ಪೆ),ಸಿಡಿಮದ್ದುಗಳ ಸಿಡಿತ,ವೇಷಭೂಷಣ ನೃತ್ಯ-ಕುಣಿತ,ವಿಶೇಷ ಆತುರತೆ ಹೆಚ್ಚಿಸುವ ಕವಾಯತ್ತುಗಳು,ಮಧ್ಯರಾತ್ರಿಯ ನಂತರ ರಥವನ್ನು ಎಳೆಯುವ ಭವ್ಯನೋಟ...ಆಹಾ! ಹೌದು... ಈ ಎಲ್ಲಾ ವಿಸ್ಮಯಕಾರಿ ನೋಟಗಳು ರಥೋತ್ಸವ ಬಿಟ್ಟು ಇನ್ನೇಲ್ಲಿಯಾದರೂ ಸೀಗುವುದೇ?

ಜಾತ್ರೆಯ ದಿನದಂದು ಆಜ್ಜ,ಅಪ್ಪ ಮತ್ತು ಆಮ್ಮ ಕೊಟ್ಟ ಪುಡಿಕಾಸನ್ನು ಚಡ್ಡಿಯ ಜೇಬಿನಲ್ಲಿಟ್ಟು ಒಬ್ಬನೇ ಹೋದ ನೆನಪು,ಇರುವ ಕೆಲವು ಪುಡಿಕಾಸನ್ನು ಯಾರಾದರೂ ಕದಿಮರು ಕದ್ದರು? ಎಂಬ ಭಯದಿಂದ ಹಣವಿದ್ದ ಜೇಬಿನ ಮೇಲೆ ಒಂದು ಕೈ ಇಟ್ಟು ಜಾತ್ರೆಯಲ್ಲೆಲ್ಲ ಸುತ್ತಾಡಿದ್ದುದೊಡ್ಡ ಜಾತ್ರಾ ಸಂತೆಯಲ್ಲಿ ಎಷ್ಟೊಂದು ಆಟದ ಸಾಮಾನುಗಳು? ಯಾವುದು ಖರೀದಿಸುವುದು, ಯಾವುದು ಬೀಡುವುದು? ಎಂಬ ಗೊಂದಲ.ಕೊನೆಗೆ ಮೂರ್ಖನಾಗಿ ಖರೀದಿಸಿದ ಆಟದ ಕಾರು ಮನೆಗೆ ಸೇರಿದ ಕೆಲವೇ ಘಂಟೆಗಳಲ್ಲಿ ಕೆಟ್ಟುಹೋದ ಪ್ರಸಂಗ,ಐಸ್‌ಕ್ರೀಮ್ ತಿನ್ನಬಾರದೆಂದರೂ ತಿಂದು ಬಂದು ಮರುದಿನ ಆದ ನೆಗಡಿಯ ಸಲುವಾಗಿ ಆಮ್ಮನಿಂದ ತಿಂದ ಬೈಗುಳ.ಮಿಟಾಯಿ ತರಲೆಂದು ಆಮ್ಮ ನೀಡಿದ ಹಣದಲ್ಲಿ ಆಟದ ಸಾಮಾನನ್ನು ಕೊಂಡು ಮನೆಯಲ್ಲಿ ಆವಿತುಕೊಂಡ ದಿನ,ಉತ್ಸವದ ಮಧ್ಯಾಹ್ನ ಚಿನ್ನಕ್ಕನ ಮನೆಗೆ ಹಬ್ಬದೂಟಕ್ಕೆ ಹೋದ ನೆನಪು,ಇವುಗಳೆಲ್ಲ ಇಂದು ನಿನ್ನೆಯ ಘಟನೆಗಳಂತೆ ಇನ್ನೂ ನನ್ನ ಮತಿಪಟಲದಲ್ಲಿ ಹಚ್ಚಹಸುರಾಗಿವೆ.

ಮಹಾತೋಭಾರ ಸಿದ್ಧಿವಿನಾಯಕ ದೇವಾಲಯ

ಹೌದು,ಈ ಎಲ್ಲಾ ಘಟನೆಗಳು ಪ್ರತಿವರ್ಷವು ದೀಪೋತ್ಸವ ಬಂದಾಗ ನೆನಪಾಗುತ್ತವೆ.ಕೆಲವೊಮ್ಮೆ ಇಂತಹ ನೆನಪುಗಳೇ ಮನಸ್ಸಿಗೆ ಒಂದು ರೀತಿಯ ಹಿತವನ್ನು ನೀಡುತ್ತವೆ.ಅದಕ್ಕೆ ಬಾಲ್ಯದ ನೆನಪುಗಳು ವಜ್ರಗಳಿಗಿಂತಲೂ ದುಬಾರಿ. ಇರಲಿ,ಉಪ್ಪೂರು ದೀಪೋತ್ಸವ ಎಂದಾಕ್ಷಣ ಪ್ರತಿವರ್ಷದಂತೆ ಈ ವರ್ಷವೂ ಬಾಲ್ಯದ ನೆನಪುಗಳು ಮರುಕಳಿಸಿರುವ ಜೊತೆಗೆ,ಇತ್ತಿಚಿಗೆ ತುಳುನಾಡಿನ ಇತಿಹಾಸದ ಪುಸ್ತಕದಲ್ಲಿ ಉಪ್ಪೂರು ಸಿದ್ಧಿವಿನಾಯಕ ದೇವಾಲಯದ ಬಗ್ಗೆ ನಾ ಓದಿದ ಕೆಲವು ಸಂಗತಿಗಳು ನೆನಪಿಗೆ ಬರುತ್ತಿವೆ.ಆವುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.


ಮಹಾತೋಭಾರ ಶ್ರೀ ಸಿದ್ಧಿವಿನಾಯಕ ದೇವಾಲಯ

ಶ್ರೀ ಸಿದ್ಧಿವಿನಾಯಕ ದೇವಸ್ಥಾನವು,ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ-ಬ್ರಹ್ಮಾವರದ ಮಧ್ಯೆ ಉಡುಪಿಯಿಂದ 5ಕಿ.ಮೀ ದೂರದಲ್ಲಿ ಕಲ್ಯಾಣಪುರ ಸೇತುವೆ ದಾಟಿದ ಬಳಿಕ ಕೊಳಲಗಿರಿ ರಸ್ತೆ(ಕೆ.ಜಿ ರೋಡ್) ತಿರುವಿನ ಮುಖಾಂತರ ಅರ್ಧ ಕಿ.ಮೀ ಸಾಗಿದಾಗ ಸಿಗುತ್ತದೆ.

ಸಿದ್ಧಿವಿನಾಯಕ ಈ ದೇವಸ್ಥಾನದ ಪ್ರಧಾನ ಆರಾಧ್ಯಮೂರ್ತಿ.ಇಲ್ಲಿಯ ಪ್ರಮುಖ ವೈಶಿಷ್ಟ್ಯವೆಂದರೆ ಶಿವ-ಗಣಪತಿಯರು ಒಂದಾಗಿರುವುದು.ಇಲ್ಲಿರುವ ಶಿವಲಿಂಗದ ಮೇಲೆ ಗಣಪತಿಮಂಡಲವಿದೆ.ಇದು ಬಹಳ ಅಪೂರ್ವವಾದದು.ಈ ವಿಶಿಷ್ಟ ಗಣಪತಿಮಂಡಲವಿರುವ ಶಿವಲಿಂಗವು 8ನೇಯ ಶತಮಾನದೆಂದು ಖ್ಯಾತ ಇತಿಹಾಸ ತಜ್ಞ ದಿ.ಡಾ|ಪಿ.ಗುರುರಾಜ್ ಭಟ್ಟರು ಆಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹೀಗೆ ವೇದೋಕ್ತವಾಗಿ ಗಣಪತಿಚಕ್ರ ಸಹಿತ ಶಿವಲಿಂಗ ಪ್ರತಿಷ್ಟಾಪನೆಗೊಂಡು ಪೂಜೆಗೊಳ್ಳುವುದು ಈ ದೇವಾಲಯಲ್ಲಿ ಮಾತ್ರ ಎಂದು ಹೇಳುತ್ತಾರೆ.

ಈ ದೇವಾಲಯದ ಗರ್ಭಗುಡಿಯ ದಕ್ಷಿಣ ಬದಿಯ ಪೌಳಿಯ ಮೂಲೆಗಳಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಗುಡಿವಿದೆ.ದೇವಾಲಯದ ಮುಂಭಾಗದಲ್ಲಿ ಬ್ರಹ್ಮ ಹಾಗೂ ಪರಿವಾರ ದೇವತೆಗಳ ಗುಡಿಯಿದೆ.ಆಗ್ನೇಯ ದಿಕ್ಕಿನಲ್ಲಿ ಒಲಗ ಮಂಟಪವಿದೆ.ಈಶಾನ್ಯ ಭಾಗದಲ್ಲಿ 'ಸಿದ್ಧಿ ಸರೋವರ'ವಿದೆ. ದೇವಾಲಯದಲ್ಲಿ ಆರಾಧಿಸಲ್ಪಡುತ್ತಿರುವ ಶ್ರೀ ಸಿಧ್ಧಿವಿನಾಯಕ ದೇವರ ಶಿಲಾವಿಗ್ರಹವು ಸುಮಾರು ಕ್ರಿ.ಶ 13ನೇಯ ಶತಮಾನಕ್ಕೆ ಸರಿ ಹೊಂದುತ್ತದೆಂದು ಇತಿಹಾಸ ತಜ್ಞ ದಿವಂಗತ ಡಾ|ಪಿ.ಗುರುರಾಜ್ ಭಟ್ಟರು ಹಾಗೂ ಕೆ.ಜೆ ವಸಂತ ಮಾಧವರು ಆಭಿಪ್ರಾಯ ಪಟ್ಟಿರುತ್ತಾರೆ.ಇಲ್ಲಿರುವ ಶಿಲಾಶಾಸನಗಳಿಂದ ಶ್ರೀ ದೇವಳಕ್ಕೆ ವಿಜಯ ನಗರದ ಆರಸನಾದ ಬುಕ್ಕರಾಯ ಮತ್ತು ಆಚ್ಯುತರಾಯ ಇವರ ಆಳ್ವಿಕೆಯ ಕಾಲದಲ್ಲಿ ಭೂಮಿಯನ್ನು ಉಂಬಳಿ ಬಿಟ್ಟಿರುದಾಗಿ ತಿಳಿದು ಬರುತ್ತದೆ.

ಶ್ರೀ ಗಂಗಾಧರೇಶ್ವರ ಸ್ವಾಮಿ
ಈ ದೇವಾಲಯದ ಶಿಲಾಮಯ ಗರ್ಭಗುಡಿ ಮತ್ತು ತೀರ್ಥಮಂಟಪ ಸುಮಾರು 73ವರ್ಷಗಳ ಹಿಂದೆ ನವೀಕರಣಗೊಂಡಿದೆ.ಆನಂತರ ದೇವಳದ ಹೆಬ್ಬಾಗಿಲುಆಂತಸ್ತುರಚನೆಒಳಪ್ರಾಂಗಣಕ್ಕೆ ಒರೆಕಲ್ಲು ಹಾಸುವಿಕೆಪರಿವಾರ ದೇವತೆಗಳ ನೂತನ ಕಟ್ಟಡವಾಲಗ ಮಂಟಪಕೆರೆ ನವೀಕರಣಶಿಲಾಮಯ ಮುಖದ್ವಾರ ಮುಂತಾದ ಆಭಿವೃದ್ಧಿ ಕಾರ್ಯಗಳು ನಡೆದಿವೆ.1994ರ ಆವಧಿಯಲ್ಲಿ ಶ್ರೀ ಸಿದ್ಧಿವಿನಾಯಕ ಸ್ವಾಮಿ ಹಾಗೂ ಶ್ರೀ ಗಂಗಾಧರೇಶ್ವರ ಸ್ವಾಮಿ ಅಷ್ಟಬಂಧ  ಪೂರ್ವಕ ಪ್ರತಿಷ್ಠೆ,ಬ್ರಹ್ಮಕಲಶಾಭಿಷೇಕ,ಸಹಸ್ರ ನಾರಿಕೇಳ ಮಹಾಯಾಗ,ರಥೋತ್ಸವ ವಿಜೃಂಭಣೆಯಿಂದ ಜರಗಿದ್ದವು.ಈ ಸಂಧರ್ಭದಲ್ಲಿ ನವೀಕರಣಗೊಂಡ 'ಸಿದ್ಧಿ ಸರೋವರ' ಉದ್ಘಾಟನೆಗೊಂಡಿತು.ಈ ದೇವಸ್ಥಾನದಲ್ಲಿ ಪ್ರತಿವರ್ಷ ಮಹಾಚೌತಿ, ರಂಗಪೂಜೆ, ಸಂಕಷ್ಟಹರ ಚತುರ್ಥಿ, ಸೋಣಂತಿ ತಿಂಗಳಲ್ಲಿ ವಿಶೇಷ ಪೂಜೆ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ತೇಪೋತ್ಸವ, ರಥೋತ್ಸವ ಹಾಗೂ ಕಾರ್ತಿಮಾಸ ಆಚರಣೆಗಳು ವಿಜೃಂಭಟೆಯಿಂದ ಜರಗುತ್ತವೆ.

ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಈ ದೇವಾಲಯದಲ್ಲಿ ನಾಗದೇವರಿಗೆ ಆಶ್ಲೇಷ ಬಲಿ,ಬ್ರಹ್ಮಪರಿವಾರಕ್ಕೆ  ಪುನಃ-ಪ್ರತಿಷ್ಟಾ ವಿಧಿ,ನವಕ ಪ್ರಧಾನ,ಶ್ರೀ ಗಂಗಾಧರೇಶ್ವರ ದೇವರ ಪ್ರತಿಷ್ಠೆ,ಕಲಾಭಿವೃದ್ಧಿ ಹೋಮ,ಕಲಶಾಭಿಷೇಕ,ಶ್ರೀ ಸಿದ್ಧಿ ವಿನಾಯಕರಿಗೆ ದೇವಸ್ಥಾನದಲ್ಲಿ ವಾಸ್ತು, ರಾಕ್ಷೋಘ್ನ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಬ್ರಹ್ಮಾಕಲಾಶಭೀಷೆಕ, ಸಹಸ್ರಾ ನಾರಿಕೇಳ ಗಣಯಾಗ, ರಂಗಪೂಜೆ, ರಥೋತ್ಸವ ಆಚರಣೆ ಜರಗಿದ್ದವು.

 ಐತಿಹಾಸಿಕ ಉಪ್ಪೂರು ಶಾಸನ

ಐತಿಹಾಸಿಕ ಉಪ್ಪೂರು ಶಾಸನ
ಇತಿಹಾಸದ ಉಪ್ಪೂರು ಶಾಸನದ ಬಗ್ಗೆ ಹೇಳಲೇಬೇಕು.ಉಪ್ಪೂರು ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಜಯನಗರದ ಆರಸ ಆಚ್ಯುತರಾಯನ ಆಳ್ವಿಕೆಯ ಕಾಲದ ಶಾಸನವೊಂದಿದೆ. ಇದರಲ್ಲಿ ಕೊಂಡಪ್ಪ ಒಡೆಯನು ಆ ಕಾಲದಲ್ಲಿ ಬಾರಕೂರಿನ ರಾಜ್ಯಪಾಲವಾಗಿದ್ದುದಾಗಿ ಹೇಳಿದೆ.1536ರಲ್ಲಿ ಆಚ್ಯುತರಾಯನಿಂದ ಬಾರಕೂರು ಹಾಗೂ ಮಂಗಳೂರು ರಾಜ್ಯಗಳ ಆಡಳಿತ ಅಧಿಕಾರವನ್ನು ಪಡೆದುಕೊಂಡ ಸುಂಕಣ್ಣರಾಯ,ಬಾರಕೂರು ರಾಜ್ಯಕ್ಕೆ ಕೊಂಡಪ್ಪ ಒಡೆಯನನ್ನು ರಾಜ್ಯಪಾಲನಾಗಿ ನೇಮಿಸುತ್ತಾನೆ.
ಈ ಬಾರಕೂರಿನ ರಾಜ್ಯಪಾಲ ಕೊಂಡಪ್ಪ ಒಡೆಯನು ಉಪ್ಪೂರು ಗ್ರಾಮದ ಮೇಲೆ ರಾಜಕಾರ್ಯ ಮಾಡಬೇಕಾಗಿ ಬಂದಾಗ ಅವನು ಸೈನ್ಯ ಸಹಿತವಾಗಿ ಉಪ್ಪೂರು ಗ್ರಾಮದ ಮೇಲೆ ದಾಳಿ ಮಾಡುವನು.ಜನರ ಪ್ರತಿಭಟನೆಯಿಂದಾಗಿ ತೆರಿಗೆಯನ್ನು ಬಲತ್ಕಾರವಾಗಿ ವಸೂಲು ಮಾಡವುದು ಈ ದಾಳಿಯ ಉದ್ದೇಶವಾಗಿರುತ್ತದೆ.ಆದರೆ ಈ ದಾಳಿಯ ವೇಳೆಯಲ್ಲಿ ಪುರುಷರ ಪ್ರಾಣ ಹಾಗೂ ಸ್ತ್ರೀಯರ ಮಾನ ಹಾನಿಯಾಗುತ್ತದೆ.ಇದಕ್ಕೆ ಪರಿಹಾರವಾಗಿ ರಾಜ್ಯಪಾಲ ಕೊಂಡಪ್ಪ ಒಡೆಯನು ಗ್ರಾಮ ನಿವಾಸಿಯಾದ ಶಿವ ಕೇಕುಡೆ ಎಂಬ ವ್ಯಕ್ತಿಗೆ ಅಲ್ಲಿ ತೆರಿಗೆಯಿಂದ ಬಂದ ಹಣವನ್ನು ನೀಡುತ್ತಾನೆ.

ಐತಿಹಾಸಿಕ ಉಪ್ಪೂರು ಶಾಸನ ವಿವರಣೆ
ಹೀಗೆ ಊರಿನವರ ಮೇಲೆ ನಡೆಸಿದ ಆತ್ಯಚಾರದಿಂದ ರಾಜ್ಯಪಾಲ ಪದವಿಯನ್ನು ಕೊಂಡಪ್ಪ ಒಡೆಯನು ಕಳೆದುಕೊಳ್ಳುತ್ತಾನೆ.ಆತನ ನಂತರ ಆ ಪದವಿ ಪಡೆದ ಪಂಡರಿದೇವ ಒಡೆಯನ ಕಾಲದ ಕೊಟೇಶ್ವರ ಶಾಸನವೊಂದರಲ್ಲಿ ಕೊಂಡಪ್ಪ ಒಡೆಯ ಸಾಮಾನ್ಯ ದಾನಿಯಾಗಿ ಮಾತ್ರ ಕಂಡು ಬರುತ್ತಾನೆ.

ಉಪ್ಪೂರು ಶಾಸನವು ರಾಜಕೀಯ ಇತಿಹಾಸ,ವಿಜಯನಗರದ ಪ್ರಾಂತೀಯ ಧೋರಣೆ ಮತ್ತು ಇದಕ್ಕೆ ಸ್ಥಳೀಯ ಪ್ರತಿಕ್ರಿಯೆ ಈ ವಿಷಯಗಳ ಮೇಲೆ ಬೆಳಕು ಚೆಲ್ಲುವ ಆಮೂಲ್ಯವಾದ ಆಕರವಾಗಿದೆ.

 ದೇವಸ್ಥಾನದ ಬಗ್ಗೆ ಪ್ರಚಲಿತದಲ್ಲಿರುವ ಪುರಾಣ ಕಥೆ:

ಈ ಕ್ಷೇತ್ರದ ಬಗ್ಗೆ ಪ್ರಚಲಿತವಿರುವ ಒಂದು ಪುರಾಣದ ಕಥೆಯ ಪ್ರಕಾರ ದ್ವಾರಕೆಯಲ್ಲಿ ಗೋಪಿಕಾ ಸ್ತ್ರೀಯರಿಂದ ಆರಾಧಿಸಲ್ಪಡುತ್ತಿದ್ದ ಈ ಗಣಪತಿ ಮೂರ್ತಿಯು ಸ್ವರ್ಣ ನದಿಯ ಪ್ರಾರ್ಶ್ಚ ಭಾಗದಲ್ಲಿ ಪ್ರಾಣಿಪೀಠ, ಶೀಲಾಶಾಸನ ಸಮೇತವಾಗಿ ಗೋಚರಿಸಲ್ಪಟ್ಟು ಆದನ್ನು ಯಾರಿಂದಲೂ ಮೇಲೆ ತೆಗೆಯಲು ಆಸಾಧ್ಯವಾದಗ ಪವಾಡ ಪುರುಷರೊರ್ವರು ಅದನ್ನು ಮೇಲೆ ತಂದು ಗ್ರಾಮಸ್ಥರ ನೆರವಿನಿಂದ ಪ್ರತಿಶ್ಟಾಪಿಸಿದನೆಂದು ಹೇಳಲಾಗುತ್ತದೆ.

ಗ್ರಂಥಋಣ:

1. ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಮತ್ತು ಡಾ| ಪಿ.ಎನ್.ನರಸಿಂಹಮೂರ್ತಿ, ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳು, ಪುಟ ಸಂಕೆ 299-300
2. ಡಾ|ಪಿ.ಗುರುರಾಜ್ ಭಟ್ಟ್ Book of Antiquities of South Canara ಪುಟ ಸಂಕೆ-6
3. ಜೀರ್ಣೊದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಮನವಿ ಪತ್ರಿಕೆ, ಶ್ರೀ ಸಿದ್ಧಿವಿನಾಯಕ ದೇವಸ್ಥಾನ
4.ತುಳುನಾಡಿನ ಆರಸರ ಕಾಲದ ಶಾಸನಗಳು ಹಾಗೂ ವಿಶ್ಲೇಷಣೆಗಳು.

5. ಚಿತ್ರ ಕೃಪೆ:  ಗೂಗಲ್ ಅಂತರ್ಜಾಲ


No comments:

Post a Comment